ಚೈಲ್ಡ್, ಜೊಸೈಯ
1630-1699. ಒಬ್ಬ ಇಂಗ್ಲಿಷ್ ವ್ಯಾಪಾರಿ. ಈಸ್ಟ್ ಇಂಡಿಯ ಕಂಪನಿಯ ಗವರ್ನರ್ ಆಗಿದ್ದವ. ಅರ್ಥವಿಚಾರಗಳನ್ನು ಬಲ್ಲವನಾಗಿದ್ದ. ಜನನ 1630ರಲ್ಲಿ ಲಂಡನ್ನಿನಲ್ಲಿ. ನೌಕಾಪಡೆಗೆ ಸಾಮಗ್ರಿ ಸರಬರಾಯಿಗಾರನಾಗಿ ಈತ ಅಗಾಧ ಲಾಭ ಗಳಿಸಿ ಶ್ರೀಮಂತನಾದ ಈಸ್ಟ್ ಇಂಡಿಯ ಕಂಪನಿಯ ಬಂಡವಾಳದಲ್ಲಿ ಹಣ ಹೂಡಿದ. ಈಸ್ಟ್ ಇಂಡಿಯ ಕಂಪನಿಗೆ ರಾಜಕೀಯಾಧಿಕಾರ ದೊರಕಬೇಕು. ವ್ಯಾಪಾರದಲ್ಲಿ ಅದರೊಂದಿಗೆ ಪೈಪೋಟಿ ನಡೆಯದಂತೆ ನಿರ್ಬಂಧ ವಿಧಿಸಬೇಕು-ಎಂದು ಈತ ನಡೆಸಿದ ಪ್ರಚಾರ ಇವನಿಗೆ ಕಂಪನಿಯ ಷೇರುದಾರರ ವಿಶ್ವಾಸವನ್ನು ಗಳಿಸಿಕೊಟ್ಟಿತು. 1677ರಲ್ಲಿ ಚೈಲ್ಡ್ ಅದರ ನಿರ್ದೇಶಕನಾದ. ಆಮೇಲೆ ಅನುಕ್ರಮವಾಗಿ ಅವನಿಗೆ ಡೆಪ್ಯುಟಿ ಗವರ್ನರ್ ಮತ್ತು ಗವರ್ನರ್ ಹುದ್ದೆಗಳು ದೊರೆತವು. ಸ್ವಲ್ಪ ಕಾಲ ಅವನು ಕಂಪನಿಯ ಏಕೈಕ ಮಾಲೀಕನೆಂಬಂತೆ ವಿಶೇಷ ಅಧಿಕಾರ ಚಲಾಯಿಸಿ ವ್ಯವಹಾರ ನಡೆಸಿದ. ಅರ್ಥಶಾಸ್ತ್ರ ವಿಚಾರದಲ್ಲಿ ಇವನು ವಿಶೇಷ ಚಿಂತನೆ ಹರಿಸಿದನಲ್ಲದೆ ಕೆಲವು ಕೃತಿಗಳನ್ನೂ ರಚಿಸಿದ. ಕಡಿಮೆ ಬಡ್ಡಿ ಮತ್ತು ಉದಾರ ವ್ಯಾಪಾರನೀತಿಗಳಿಂದಾಗಿ ಡಚ್ಚರು ಪ್ರವರ್ಧಮಾನ ಹೊಂದಿದ್ದಾರೆಂದು ಇವನು ವಾದಿಸಿದ. ಬ್ರಿಟಿಷರೂ ಅಂಥ ನೀತಿ ತಳೆಯಬೇಕೆಂಬುದು ಇವನ ಪ್ರತಿಪಾದನೆಯಾಗಿತ್ತು. ಒಂದು ದೇಶಕ್ಕೆ ತನ್ನ ವಸಾಹತುಗಳೊಂದಿಗಿನ ವ್ಯಾಪಾರದಲ್ಲಿ ಏಕಸ್ವಾಮ್ಯ ಇರತಕ್ಕದೆಂಬುದು ಇವನ ಇನ್ನೊಂದು ತರ್ಕ. ಭ್ರೀಫ್ ಆಬ್ಸರ್ವೇರ್ಷನ್ಸ್ ಕನ್ಸರ್ನಿಂಗ್ ಟ್ರೇಡ್ ಅಂಡ್ ದಿ ಇಂಟರೆಸ್ಟ್ ಆಫ್ ಮನಿ, ಎ ನ್ಯೂ ಡಿಸ್ಕೋರ್ಸ್ ಆಫ್ ಟ್ರೇಡ್-ಇವು ಈತನ ಕೃತಿಗಳಲ್ಲಿ ಎರಡು. ಸರ್ ಪದವಿ ಗಳಿಸಿದ್ದ ಜೊಸೈಯ ಚೈಲ್ಡ್ 1699ರ ಜೂನ್ 22ರಂದು ತೀರಿಕೊಂಡ.
(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ